About Me

My photo
Bangalore, Karnataka, India
ನನ್ನನ್ನು ನಾನೆ ಹುಡುಕುತಿದ್ದೇನೆ.

Monday, April 28, 2014

ನನ್ನಾಕೆ ಚೆನ್ನಗಿರಿಯ ಚೆಲುವೆ

                                ನನ್ನಾಕೆ ಚೆನ್ನಗಿರಿಯ ಚೆಲುವೆ

ರೈಲು, ಬಸ್ಸಿನಲಿ ಬಂದು ; ಕಾಲುದಾರಿಯಲಿ ನೆಡದು
ನಿನ್ನ ನೋಡಲು ಬಂದ ಅಂದು ತಡವಾಗಿತ್ತು
ಆದರೇನಂತೆ ಕೊಟ್ಟ ಕೇಸರಿಬಾತಿನಲಿ
ಸಿಹಿ ಸ್ವಲ್ಪ ಜಾಸ್ತಿಯೇ ಇತ್ತು !

ಸದ್ದು ಗದ್ದಲದ ನಡುವೆ ; ಪರದೆಯ ಸರಿಸಿರುವೆ
ಲಜ್ಜೆಯ ಹೆಜ್ಜೆಯೊಂದಿಗೆ ನೀ ಬಂದೆ ರಂಗ ಮಂದಿರಕೆ
ಆ ಕ್ಷಣದ ನನ್ನ ಹೃದಯದ ಬಡಿತ ಮತ್ತೆಂದು ಆಗಿಲ್ಲ
ಮುಗ್ಧ ಮನಸಿನ ಹುಡುಗಿ, ಆಕೆ ಚೆನ್ನಗಿರಿಯ ಚೆಲುವೆ !

ಕೆಲವರ ಕಣ್ಣುಗಳು ನನ್ನಕಡೆ ; ಇನ್ನುಳಿದವರದು ಅವಳಕಡೆ
ಈಗ ಮಾತಿಲ್ಲ , ಬರಿಯ ಮಂದಹಾಸ , ಬರಿಯ ಕಣ್ಣೋಟವೆ
ಅವಳಲ್ಲ, ಇವಳು ಆನುಷ ಮತ್ತೊಮ್ಮೆ ನೋಡಿ ಎಂದಾಂತಯಿತು ಯಾರೋ
ಅವಳ ಕಣ್ಣಿನಂದಕೆ ಸೋತು, ನನ್ನ ನಯನಕೆ ನಾ ಒಪ್ಪಿಗೆಯನಿತ್ತೆ !

ಪಕ್ಷಮಾಸದ ಮೊದಲು ; ಉತ್ತರಕೆ ಕಾದಿರಲು
ಮರುದಿನವೆ ಒಪ್ಪಿಗೆಯು ಬಂದಿಹುದು
ಆಮೇಲೆ, ಮಾತುಕತೆ, ಸಂಭಾಷಣೆ, ಮೂಹೂರ್ತ
ಸ್ನೇಹಿತನ ಮನೆಯಲ್ಲಿ, ಅವಳಣ್ಣನ ನೋಡುವ ಕಾಲ ಒದಗಿಹುದು !

ಅಪ್ಪ ಅಮ್ಮರ ನೆರವು ; ಅತ್ತೆ ಮಾವರ ಒಲವು
ತಮ್ಮ ತಂಗಿಯರ ವಾತ್ಸಲ್ಯ, ಸ್ನೇಹಿತನ ಸಲೆಹಿಯದು
ಗುರುಹಿರಿಯರ ಸಮ್ಮುಖದಿ , ಶಿವಮೊಗ್ಗೆಯ ಊರಿನಲಿ
ಬಾಳಪಯಣವ ಪ್ರಾರಂಭಿಸಿ, ಇಂದಿಗೆ ವರುಷ ಸಂದಿಹುದು !


ನನ್ನ ಬಾಳಸಂಗಾತಿಗೆ ಈ ದಿನದ ಶುಭಾಷಯಗಳು.

Saturday, June 23, 2012

"ಸ್ಪಂದನ " - ಸ್ಪಂದಿಸಿ

ಗೆಳೆಯರೇ , ನಾನು ಕೆಲಸ ಮಾಡುತ್ತಿರುವ ಕಂಪನಿಯ CSR ( Corporate Social Responsibility ) ಚಟುವಟಿಕೆಯ ಒಂದು ಅಂಗ ಈ ಸ್ಪಂದನ .  ಈ ಕಾರ್ಯಕ್ರಮದ ಮೂಲ ಉದ್ದೇಶ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಕಲಿಸುವುದು.  ಇದಕ್ಕಾಗಿ ಬೆಂಗಳೂರಿನ ಗರುಡಾಚಾರ್ ಪಾಳ್ಯದ  ಸರ್ಕಾರಿ ಶಾಲೆಯೊಂದನ್ನು ಗುರುತಿಸಲಾಗಿದೆ . ಕಾರ್ಯಕರ್ತನಾಗಿ ಸೇರಿದ ನಾನು ಹೀಗೊಂದು ದಿನ ಶಾಲೆಗೆ ಭೇಟಿ ಕೊಟ್ಟೆನು. ಅಲ್ಲಿಯ ಶಿಕ್ಷರೊಂದಿಗೆ ಮಾತನಾಡಿ ಮೂರನೆ ತರಗತಿ ಮಕ್ಕಳಿಗೆ ಪಾಠ ಮಾಡುವ ಅನುಮತಿ ಪಡೆದು , ಕೊಠಡಿಯೊಳಗೆ ಬಂದೆನು. ಕಪ್ಪು ಹಲಗೆ , ಸೀಮೆಸುಣ್ಣ ,  ಮಕ್ಕಳು ಧರಿಸಿದ್ದ ಶಾಲೆಯ ಸಮವಸ್ತ್ರ , ಇತ್ಯದಿಗಳನ್ನು ನೋಡಿ ನಾ  ಓದಿದ  ಪ್ರಾರ್ಥಮಿಕ  ಶಾಲೆಯ ಚಿತ್ರ ಕಣ್ಣು ಮುಂದೆ ಬಂದಂತಾಯಿತು.  ಬಾಲ್ಯವನ್ನು ನೆನೆದು ಖುಷಿಯಾದ ಮನಸ್ಸಿಗೆ , ವಾತಾವರಣ ನೋಡಿ  ಮರುಕವೂ ಉಂಟಾಯಿತು. ಮಕ್ಕಳನ್ನು ಮಾತನಾಡಿಸಿದ ನಂತರ , ಪುಸ್ತಕದಲ್ಲಿ ಬರೆದಂತೆ " Dark , Bark , -----"   ಎಂದು ಕಪ್ಪು ಹಲಗೆಯ ಮೇಲೆ  ಬರೆದೆ. ಕೊಟ್ಟ ಎರೆಡು ಶಬ್ದದ ಪ್ರಾಸದಂತೆ ಮೂರನೆ ಶಬ್ದ ಬರೆಯಲು ಸೂಚಿಸಿತ್ತು . ಎಲ್ಲರೂ ಮೌನವಾಗಿದ್ದು ಕಂಡು ಉತ್ತರಕ್ಕಾಗಿ ಕುತೂಹಲದಿಂದ ಕಾದೆ . ಮಕ್ಕಳು ನನ್ನನ್ನು  ತದೇಕಚಿತ್ತದಿಂದ ನೋಡುತ್ತ D..B... ಎಂದು ಕೂಗುತ್ತಿದ್ದನ್ನು ನೋಡಿ ,  ಹೊರಗೆ ನಾಲ್ಕನೆ ತರಗತಿಗೆ ಪಾಠ ಮಾಡುತಿದ್ದ ಶಿಕ್ಷಕರು ಹೇಳಿದರು " ಮಕ್ಕಳಿಗೆ A,B,C,D ....a,b,c,d ಅಷ್ಟು ಸರಿಯಾಗಿ ಬರುವುದಿಲ್ಲ "   ಎಂದು . ಕೇಳಿ ಧಿಗ್ಬ್ರಾಂತನಾದೆ. !! ಅಕ್ಷರ ಕಲಿಯದ ಮಕ್ಕಳು ಶಬ್ದ ಕಲಿಯುವುದು ಎಂದು ? ಶಬ್ದ ಕಲಿತು ವಾಕ್ಯ ರಚಿಸುವುದು ಎಂದು ? .. ನಂತರ ಕಪ್ಪು ಹಲಗೆಯ ಮೇಲೆ ಅಕ್ಷರ ಬರೆದು ಗುರುತಿಸುವಂತೆ ಸೂಚಿಸಿದೆ . "d"  ಎಂದು ಬರೆದಾಗ "b" ಎಂದು "j" ಎಂದು ಬರೆದಾಗ "i" ಎಂದು ಕೂಗಲಾರಂಭಿಸಿದರು . ಶಿಕ್ಷಣ ವ್ಯವಸ್ಥೆಯನ್ನು ಕಂಡು ಅಸಮಾಧಾನವಾಯಿತು .  ಮುಂದಿನ ಎರೆಡು  ಭೇಟಿಗಳಲ್ಲಿಯೂ ಅಕ್ಷರ ಕಲಿಸಿದೆ . ಹಿಂದಿನ  ಸಾಲಿನಲ್ಲಿ  ಕೂಡುವ ಲಿಂಗರಾಜು ಎನ್ನುವ ವಿದ್ಯಾರ್ಥಿಯನ್ನು ನಾನು ಮೊದಲನೆಯ ದಿನ  ಗಮನಿಸಿದೆ.  ತನ್ನದೇ ಆದ ಪ್ರಪಂಚದಲ್ಲಿ ಕೂತಿದ್ದ  . ಕೇಳಿದಾಗ ತನಗೆ ಬರಿಯಲು ಬರುವುದಿಲ್ಲವೆಂದು ಹೇಳಿದ . ಮುಂದಿನ ಸಾಲಿನಲ್ಲಿ ಕೂರಿಸಿ ಅವನ ಪುಸ್ತಕದಲ್ಲಿ  ಅಕ್ಷರವನ್ನು ಅವನೊಂದಿಗೆ ಹೇಳಿಸುತ್ತಾ  ಬರೆದು ಕೊಟ್ಟಿದ್ದೆ . ನನ್ನ ಇತ್ತೀಚಿನ ಶಾಲೆಯ ಭೇಟಿ ಮುಗಿಸಿ ಹೊರಟಿದ್ದೆ , ಸಾರ್ ..... ಎಂದು ಕೂಗುತ್ತಾ  ಲಿಂಗರಾಜು ಬಂದವನೆ ನನಗೆ a b c d ... ಈಗ ಬರುತ್ತೆ ಎಂದ. ನಾನು ಅಷ್ಟು ಗಮನಿಸಲಿಲ್ಲ .. ನೀವು ಮೊದಲನೆ ದಿನ ಬರೆದದ್ದು D .. A .. R .. K , B ..A..R..K  ಎಂದಾಗ ಆಶರ್ಯವಾಗಿ "L" ಅಕ್ಷರ ಬರೆಯಲು ಹೇಳಿದೆ . ತಲೆ ತಗ್ಗಿಸಿ  ಸುಮ್ಮನಾದ , ನನಗೆ ಆ ಕ್ಷಣ ಬೇಜಾರಾಯಿತು. ಮರು ಕ್ಷಣವೇ ತನ್ನ ಪುಸ್ತಕದ ಮೊದಲನೆ ಪುಟ ತೆಗೆದು ಯಾರೊ ಬರೆದುಕೊಟ್ಟ Lingaraju ಎನ್ನುವುದರಲ್ಲಿ ಮೊದಲನೆ ಅಕ್ಷರ ತೋರಿಸಿ ಅದರ ಕೆಳಗೆ "l"  ಎಂದು ಬರೆದ  . ನನ್ನ ಕಣ್ಣು ನನಗೆ ಗೊತ್ತಿಲ್ಲದಂತೆ ಒದ್ದೆಯಾಯಿತು . ಅವನಿಗೆ  'h', 'a' 'p' 'p' 'y' ಅಕ್ಷರ ಬರೆಯಲು ಹೇಳಿ ಹ್ಯಾಪಿ ಎಂದು ಹೇಳಿದೆ . ನನ್ನ ಕೈ ಕುಲುಕಿ ಥ್ಯಾಂಕ್ಯೂ ಸಾರ್ ಎಂದು ಕೈಗೆ ಮುತ್ತಿಟ್ಟು ಒಳಗೆ ಹೋದ . ಕಣ್ಣಿನಲ್ಲಿ ಏನೋ ಬಿದ್ದವರಂತೆ ನಟಿಸಿ ಕಣ್ಣು ವರೆಸುತ್ತಾ ನಾನು ಹೊರಟೆನು.


 ಸ್ನೇಹಿತರೆ , ಬನ್ನಿ ಸ್ಪಂದಿಸೋಣ   . ಅವಕಾಶವಂಚಿತರಿಗೆ ನಮ್ಮಿಂದಾದ ಸಹಾಯ ಮಾಡೋಣ.  ಕೇವಲ ಬಿಡುವಿನ ವೇಳೆಯಲ್ಲಿ ಸಹಾಯ ಮಾಡದೆ ಅವಶ್ಯಕತೆ ಇದ್ದಾಗಲೂ ಸಹಾಯ ಮಾಡೋಣ .  ಸಾಕ್ಷರ ಸಮಾಜ ಕಟ್ಟೋಣ !!


                                                                                                               - ರಂಗನಾಥ ಎಂ .ಪಿ 
                                                                                                                 ೨೪-೦೬-೨೦೧೨

Sunday, March 13, 2011

ನಾಗರಿ-ಕತೆ

ನಾಗರಿ-ಕತೆ

ನರನಿಂದಲೆ ನಾಗರಿಕತೆಯ
ಹುಟ್ಟು ಅವನತಿಗಲೆರಡು
ಹುಟ್ಟು ನಾಗರಿಕತೆಯ ಮೊದಲು
ಅವನತಿ ಅನ್ಯ ನಾಗರಿಕತೆಯ ಹುಟ್ಟು

ಹುಟ್ಟು ಸಾವನು ಕಂಡು
ಸಾವು ಮರುಹುಟ್ಟಾಗುತಿರಲು
ನರಜಾತಿಯ ಸಹಬಾಳ್ವೆಯದು
ಸ್ವಾರ್ಥ ವ್ಯೆಷಮ್ಯದಿಂದಲಿ ಕೂಡಿರಲು

ಸೃಷ್ಟಿನಿಯಮದಿ ಕಾಲಚಕ್ರಕೆ ಸಿಕ್ಕು
ನಾಗರಿಕತೆಯದು ನಾಶವಾದಂತೆಲ್ಲ
ಮಣ್ಣು ಮಣ್ಣಲಿ ಬೆರೆತು
ಕಲ್ಲುಗಲು ಶಿಲೆಯಾಗಿ ನಾಗರಿ-ಕತೆಯ ಹೇಳುತವೆ.

- ಎಂ. ಪಿ ರ‍ಂಗನಾಥ
೯-೪-೨೦೧೦

Friday, January 15, 2010

ನಾಳೆ ನಮಗೂ ವಯಸ್ಸಾಗುತ್ತದಲ್ಲವೆ?

ಸ್ನೇಹಿತರೆ,

ನಿಮ್ಮ ಮನೆಯಲ್ಲಿ ನಿಮ್ಮೊಂದಿಗೆ ನಿಮ್ಮ ಅಜ್ಜ -ಅಜ್ಜಿ ಇದ್ದಾರೆಯೆ? ಅಥವಾ ನಿಮ್ಮ ಹುಟ್ಟೂರಿನಲ್ಲಿದ್ದಾರೆಯೆ?ಹಾಗದರೆ ನೀವು ನಿಜವಾಗಿಯು ಭಾಗ್ಯವಂತರು.ಅಜ್ಜ-ಅಜ್ಜಿಯಂದಿರು ನಮ್ಮ ವಂಶ ವೃಕ್ಷದ ಬೇರುಗಳು. ವೃಕ್ಷದಲ್ಲಿ ಚಿಗುರೊಡೆವ ಎಲೆಗಳಿಗೆ ಬೇರು ನೀರುಣಿಸುವಂತೆ, ನಮಗೆ ಅನುಭವವೆಂಬ ನೀರುಣಿಸುವ ಪೂರ್ವಿಕರವರು. ಹಿರಿಯರ ಆರೈಕೆ, ಅವರ ಮಾತುಗಳಿಂದ ನಿಮಗೆ ಬೇಸರವಾಗಿರಬಹುದು. ಆದರೆ ನಿಮ್ಮ ಒಳಗಣ್ಣಿನಿಂದ ಅವರನ್ನು ಗಮನಿಸಿದ್ದೀರಾ?ಅವರಿಗೆ ವಯಸ್ಸಾದೆಂತಲ್ಲ ಪುಟ್ಟ ಮಗುವಿನಂತಾಗುತ್ತಾರೆ.ಆಗ ತಾನೆ ಹೆಜ್ಜೆ ಇಡಲು ಕಲಿತ ಮಗು ಆಸರೆ ಹುಡುಕಿ ನೆಡವಂತೆ,ಕೋಲಿನ ಆಸರೆ ಬಯಸುತ್ತಾರೆ. ಮಾತು ಕಲಿತ ಮಗು ಹೇಗೆ ಬಿಡುವಿಲ್ಲದೆ ಮಾತನಡುವುದೊ ಅಂತೆಯೆ ಹಿರಿಯರು ಅನುಭವದ ಮಾತನಾಡಲು ಹಂಬಲಿಸುತ್ತಾರೆ. ಮಗುವಿನಂತೆ ಅವರ ದೈನಂದಿನ ಚಟುವಟಿಕೆಗಳಿಗೆಲ್ಲ ನಮ್ಮ ಆಸರೆ ಅತ್ಯವಶ್ಯಕ.ವಯಸ್ಸಾದಂತೆಲ್ಲ ರಕ್ತದೊತ್ತಡ, ಸಕ್ಕರೆ ಖಾಯಿಲೆ ಹೀಗೆ ಒಂದಿಲ್ಲೊಂದು ರೋಗದ ನಂಟು ತಪ್ಪಿದ್ದಲ್ಲ .ಅವರಿಗೆ ಔಷಧ ಕೊಡುವುದು,ತಪಾಸಣೆಗೆ ಆಸ್ಪತ್ರೆಗೆ ಕರೆದೊಯ್ಯುವುದು ಸುಲುಭದ ಮಾತಲ್ಲ. ಅತಿಯಾದ ತಾಳ್ಮೆ ಬೇಕು. ಆರೈಕೆ ಮಾಡುವ ಮನಸ್ಸಿಲ್ಲದೆ ವಿನಾ ಕಾರಣ ಅವರ ಮೇಲೆ ಕೂಗಾಡಿ ಅವರ ಮನಸ್ಸನ್ನು ನೋಯಿಸಬೇಡಿ.ನಿಮ್ಮಿಂದ ಅವರ ಆರೈಕೆ ಸಾಧ್ಯವಿಲ್ಲ ಎಂಬುದಾದರೆ ಅವರು ಎಲ್ಲಿದ್ದರೆ ಆರೋಗ್ಯವಾಗಿರುತ್ತಾರೆಂದು ಬಯಸುತ್ತಾರೆಯೊ ಅಲ್ಲಿ ಅವರನ್ನು ಸ್ವತಂತ್ರವಾಗಿರಲು ಬಿಟ್ಟು ಬಿಡಿ. ನಿಮ್ಮ ಅಜ್ಜ-ಅಜ್ಜಿ ನಿಮ್ಮಷ್ಟು ಓದಿಲ್ಲದೆ ಇರಬಹುದು, ವಿಜ್ಙಾನ, ರಾಜಕೀಯ, ತಂತ್ರಜ್ಙಾನ,ವರ್ತಮಾನ ವಿಷಯದ ಬಗ್ಗೆ ನಿಮ್ಮಷ್ಟು ತಿಳಿಯದೆ ಇರಬಹುದು. ಆದರೆ ಮನುಷ್ಯ ಸಂಘಜೀವಿಯಾದ ಕಾರಣ ಮನುಷ್ಯ ಜೀವನಕ್ಕೆ ಅತ್ಯಾವಶ್ಯಕವಾದ ಮನುಷ್ಯ-ಮನುಷ್ಯರ ನಡುವಿನ ಸಂಬಂಧದ ಅರಿವು ಅವರಿಗಿರುತ್ತದೆ. ತಾಳ್ಮೆ,ಹಸಿವು,ಕಷ್ಟ,ಸಮಯ, ಅವಮಾನ,ಬಹುಮಾನ ಇವೆಲ್ಲವುಗಳ ಬೆಲೆ ಗೊತ್ತಾಗಿರುತ್ತದೆ.ನಿಮಗೆ ಬಿಡುವಾದಗ ಅವರೊಂದಿಗೆ ಮಾತನಾಡಿ,ಅವರ ಪ್ರತಿಯೊಂದು ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅದರಲ್ಲಿ ಅಗಾಧ ಅರ್ಥ ಅಡಗಿರುತ್ತದೆ .ದಿನದ ಹತ್ತು ನಿಮಿಷ ವಯಸ್ಸಾದವರೊಂದಿಗೂ ಹಾಗು ಹತ್ತು ನಿಮಿಷ ಸಣ್ಣ ಮಕ್ಕಳೊಂದಿಗೂ ಕಳೆದು ನೋಡಿ.ನಿಮಗೆ ಗೊತ್ತಿಲ್ಲದಂತೆ ನಿಮ್ಮ ಮನಸ್ಸು ಮುಗ್ಧವಾಗ ಬಯಸಿ ಅದೆಷ್ಟೊ ಅನುಭವದ ವಿಚಾರಗಳನ್ನು ತಿಳಿಯುತ್ತದೆ.

ಯುವಕರಾದ ನಾವು ವಯಸ್ಸಾದವರಿಗೆ ಹೇಗೆ ಗೌರವ ಸಲ್ಲಿಸಬಹುದು? ಮೊದಲನೆಯದಾಗಿ ಜನಭರಿತ ಬಸ್ಸುಗಳಲ್ಲಿ ’ಹಿರಿಯ ನಾಗರಿಕರಿಗೆ’ ಎಂದು ಕಾಯ್ದಿರಿಸಿರುವ ಜಾಗದಲ್ಲಿ ನೀವು ಕುಳಿತಿದ್ದರೆ ವೃಧ್ದರಿಗೆ ಅದನ್ನು ಬಿಟ್ಟುಕೊಡಿ.ಬೇರೆಯವರಿಗೂ ಬಿಟ್ಟು ಕೊಡುವಂತೆ ಮನವರಿಕೆ ಮಾಡಿ ಎಂಬುದು ನನ್ನ ಮನವಿ .ಹುಟ್ಟು ಹಬ್ಬಗಳ ದಿನದಂದು ಅನ್ಯ ಸಂಸ್ಕೃತಿಯರಂತೆ ದುಂದುವೆಚ್ಚ ಮಾಡುವ ಬದಲು ನಿಮ್ಮ ಅಜ್ಜ-ಅಜ್ಜಿಯರಿಗೆ ಅವಶ್ಯಕವಾದ ವಸ್ತುಗಳನ್ನು ತಂದು ಕೊಡಿ.ನಮ್ಮ ಸಮಾಜದ ಸುಶಿಕ್ಷಿತರು ತಮ್ಮ ತಂದೆ- ತಾಯಿಯರನ್ನು ನೋಡಿಕೊಳ್ಳಲಾಗದೆ ಹುಟ್ಟು ಹಾಕಿರುವ ವೃಧ್ದಾಶ್ರಮಗಳಿಗೆ ಹೋಗಿ ನಿಮ್ಮಿಂದಾದ ಸಹಾಯ ಮಾಡಿ.ನಿಮಗೆ ಸಂಜೆ ಬಿಡುವಿದ್ದರೆ ಅವರನ್ನು ವಾಯುವಿಹಾರಕ್ಕೆ ಕರೆದು ಕೊಂಡು ಹೋಗಿ.ಅವರ ಸ್ನೇಹಿತರೊಂದಿಗೆ ಅಥವಾ ಸಮಕಾಲೀನರೊಂದಿಗೆ ಹರಟಲು ಅವಕಾಶ ಮಾಡಿ ಕೊಡಿ.ಅಜ್ಜ-ಅಜ್ಜಿಯಂದಿರು ಹೇಳುವ ನಾಲ್ಕು ಅನುಭವದ ಮಾತುಗಳನ್ನು ಕೇಳುವ ತಾಳ್ಮೆಯನ್ನು ಬೆಳಸಿಕೊಳ್ಳಿ.ನೀವು ಪ್ರಚಲಿತ ತಂತ್ರಙ್ಙಾನ(ಮೊಬೈಲ್,ಎಟಿಮ್ ಬಳಕೆ) ಹಾಗು ವಿದ್ಯಮಾನದ ಬಗ್ಗೆ ಅವರೊಂದಿಗೆ ಚರ್ಚಿಸಿ .ಎಲ್ಲದಕಿಂತ ಹೆಚ್ಚಾಗಿ ವಯಸ್ಸಾದವರನ್ನು ಸ್ವತಂತ್ರವಾಗಿರಲು ಬಿಟ್ಟು ಬಿಡಿ.ನಿಮ್ಮದೇ ಆದ ಕಟ್ಟುಪಾಡುಗಳಿಂದ ಅವರನ್ನು ಬಂಧಿಸಬೇಡಿ.

ಜನವರಿ ೧೨ ರಂದು ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ನಾವು ಅರ್ಥಪೂರ್ಣವಾಗಿ ಆಚರಿಸಬೇಕೆಂದರೆ ಅವರ ಸಂದೇಶವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. " ಪ್ರಾರ್ಥಿಸುವ ತುಟಿಗಳಿಗಿಂತ ಸಹಾಯ ಮಾಡುವ ಕೈಗಳು ಪವಿತ್ರ" ಎಂಬ ಅವರ ಶಕ್ತಿವಾಣಿ ನಮ್ಮಲ್ಲಿ ಅದೆಂತಹ ಬೆಳಕನ್ನು ಮೂಡಿಸುತ್ತದೆ ಅಲ್ಲವೆ?. ಸ್ನೇಹಿತರೆ, ಸ್ವಲ್ಪ ಗಮನಿಸಿ, ಮನುಷ್ಯ ಹೆದರುವುದು ಮೂರು ಸಂಗತಿಗಳಿಗೆ. ಮೊದಲನೆಯದು ಅನಾರೋಗ್ಯ,ಎರಡನೆಯದು ವೃಧಾಪ್ಯ ಮತ್ತು ಕೊನೆಯದು ಸಾವು. ಈಗಾಗಲೆ ವೃಧಾಪ್ಯದೊಂದಿಗೆ ಅನಾರೋಗ್ಯ ಅಂಟಿಕೊಂಡು ಸಾವಿನ ಭಯದಲ್ಲಿರುವವರಿಗೆ ನಾಲ್ಕು ಭರವಸೆಯ ಮಾತನಡುವದು,ಸಹಾಯ ಮಾಡುವುದು ನಮಗೆ ಕಷ್ಟವೆ?ನಿಮ್ಮ ಅಜ್ಜ-ಅಜ್ಜಿಯಂದಿರನ್ನು ಪ್ರೀತಿಸಿ,ಗೌರವಿಸಿ. ಏಕೆಂದರೆ ನಾಳೆ ನಮಗೂ ವಯಸ್ಸಾಗುತ್ತದಲ್ಲವೆ?

Saturday, January 2, 2010

ಬದಲಾಯಿಸಿದ ವರುಷ

ಹೊಸವರುಷದಾಗಮವು ಹೊಸತೇನಲ್ಲ
ಹರಿವ ಹೊಳೆಯ ನೀರಿನ ಮೇಲೆ
ಹೊಸನೀರು ಬಂದಂತೆ
ಹೊಸದೆಂಬ ಹೆಗ್ಗಳಿಕೆ;ಒಳಗೆಲ್ಲ ಹಳೆಯದೆ.

ಅದೇ ಹರಿಯುವ ದಿಕ್ಕು
ನೀರಿಗೆ ಗುಣವಾಚಕ ಬೇರೆಯಷ್ಟೆ
ಹೊಸದುದರ ಬಯಕೆಯಲಿ
ಹಳೆಯದಕೆ ತಾತ್ಸಾರ

ದಿನ ಉರುಳಿದೆಂತೆಲ್ಲ
ದಿನಾಂಕ ಬದಲಾಯಿಸುವೆವು
ಸಂವತ್ಸರ ಕಳೆದಂತಲ್ಲ
ಪಂಚಾಂಗ ಬದಲಾದಿತು.

ನಮ್ಮ ಬದಲಾವಣೆ ಏನು?
ನಾವು ಬದಲಾಗಬೇಕೆಂಬ ಯೋಚನೆಗಳು
ಬದಲಾಯಿಸಲು ಬಯಸದಿದ್ದರೂ, ಹಳೆಯದಕೆ
ಮತ್ತೊಂದು ಕೂಡಿ ಬದಲಾಗುವ ವಯಸ್ಸು!

ಪ್ರಕೃತಿ ನಮ್ಮ ಬದಲಾವಣೆಗೆ
ಕೊಡುವ ಕಾಲವಕಾಶವೇ ಹೊಸವರುಷ
ಹಳೆಯ ತಪ್ಪು ಹೆಜ್ಜೆಗಳ ತಿಳಿದು
ಸರಿಯಾದ ಹೊಸಹೆಜ್ಜೆಯನಿಡುವ ಈ ವರುಷ

ಬದಲಾವಣೆ ಬಯಸುವ ಮನಸುಗಳೆ
ಇದೊ ನಿಮಗೆ ಹೊಸ ವರುಷದ ಶುಭಾಷಯ
ಬದಲಾದೆಂತೆಲ್ಲ ಬದಲಾಗಬೇಕು
ಏಕೆಂದರೆ ಬದಲಾವಣೆಯೆ ಜೀವನವಲ್ಲವೆ?

-ಎಂ.ಪಿ ರಂಗನಾಥ
೧-೧-೨೦೦೯

Wednesday, December 2, 2009

ನೆನಪಿನಂಗಳದಲ್ಲಿ

ನೆನಪು

ನೆನಪು ಕನ್ನಡಿಯಾಚೆಗಿನ
ಪ್ರತಿಬಿಂಬದ ಕಾಣದ ನೆರಳು
ನೆನಪು ದೀಪದ ಹುಳುವಿನ ಹೊಳಪು
ನೆನಪು ಭಾಷೆಯಿಲ್ಲದ ಮಾತು.

ಏಕಾಂತದಲಿರಬೇಕು
ಆಗ ನೆನಪಿನದೆ ಸಾಮ್ರಾಜ್ಯ
ಸಾಮ್ರಜ್ಯದ ದೊರೆ ನಾನೆಂದು
ಸಿಹಿ ನೆನಪು ಕಹಿ ನೆನಪಿನ ವ್ಯಾಜ್ಯ.

ಕಹಿ ನೆನಪು ಬೇಡವೆಂದರು
ಕಾಣಿಸುವ ಚೌತಿಯ ಚಂದದ ಚಂದಿರ
ಸಿಹಿನೆನಪೆಂಬ ದೊರೆ ಮೋಡದ ಮರೆಯಲಿ
ಕಾಣದೆ ಕುಳಿತಿರುವ ಯುಗಾದಿಯ ಶಶಾಂಕ.

ಇಬ್ಬರೂ ಚಂದ್ರರೆ,ಎರಡೂ ನೆನಪುಗಳೆ
ಕಾಣುವ ರೀತಿ,ನೆನಪುಗಳ ರುಚಿ ಬೇರೆಯಷ್ಟೆ
ಹಳಾತದಷ್ಟು ಸಿಹಿನೆನಪಿನ ಸಿಹಿ ಜಾಸ್ತಿ
ಕಹಿನೆನಪು ಹೊಸದಾದಷ್ಟು ಹುಳಿ ಹೆಚ್ಚು.

ನೆನಪು ಬಾಳೆಂಬ ಹೊತ್ತಿಗೆಯ
ಹಳೆಯ ಪುಟಗಳ ಗೊತ್ತಿರುವ ಸಾಲುಗಳು
ಒಮ್ಮೊಮ್ಮೆ ಹೊಳೆಯುತದೆ ಹಳೆತ ನೆನಪಿಸುತದೆ
ಮಿನುಗುತದೆ ಮರೆಸಿ ಮರೆಯಾಗುತದೆ.

ಒಂದೂಂದು ಪುಟದಲೊಂದೊಂದು ತರಹದ ನೆನಪುಗಳು
ಬಾಲ್ಯದ ನೆನಪುಗಳು; ನಕ್ಕು ನಗಿಸಿದ ನೆನಪುಗಳು
ಜೊತೆಯಾದ ನೆನಪುಗಳು;ಜೊತೆಯಲ್ಲಿದ್ದವರ ನೆನಪುಗಳು
ದೂರಾದ ನೆನಪುಗಳು;ದೂರ ಸರಿದವರ ನೆನಪುಗಳು.

ನೆನಪಿದೆಯೆ? ಎಂದು ನೆನಪಿಸಿದ ನೆನಪುಗಳು
ಮರೆಯಬೇಕೆಂದರು ಮರೆಯಲಾಗದ ನೆನಪುಗಳು
ಯಾರದೊ ಚಹರೆ,ಮೆಲುದನಿಯ ಸಿಹಿನೆನಪುಗಳು
ಈ ಕವನ ಬರೆಯುವಾಗ ಧುತ್ತೆಂದು ನೆನಾಪದ ನೆನಪುಗಳು.

ಹೀಗೆ ಬದುಕಿನರ್ಥ ಮೂರಕ್ಷರದ ಎರಡುಪದಡೊಳಗಿಹುದು
ನೆಡದ ದಾರಿಯ ಬಿಂಬಿಸುವ ಹಳೆಯ ನೆನಪುಗಳು
ನಾಳೆಯ ದಾರಿಯ ತೋರಿಸುವ ಹೊಸ ಕನಸುಗಳು
ನೆನಪಿನೊಂದಿಗೆ ಕನಸ ನನಸಾಗಿಸುವುದೆ ಜೀವನವಲ್ಲವೆ?

-ಎಂ.ಪಿ ರಂಗನಾಥ
೨೨-೧೧-೨೦೦೯

ಇತ್ತೀಚಿನ ಕವನ

ಮನಸಿನೊಂದಿನ ಮಾತು

ಹೀಗೊಮ್ಮೆ ನನ್ನ ಮನಸ್ಸನು
ಮಾತಿಗೆಳದು ಹೀಗೆಂದು ಪ್ರಶ್ನಿಸಿದೆ
ಮನಸ್ಸಿದ್ದರೆ ಮಾರ್ಗ ಎಂಬುತ್ತಾರಲ್ಲ ನಿಜವೆ?
ಮನಸ್ಸಿನಲ್ಲಿರುವುದೆ ಮಾತಾಗುವುದಂತಲ್ಲ ಹೌದೆ? ಎಂದು.

ಮನಸ್ಸು ಗಹಗಹಿಸಿ ನಗು ನಕ್ಕು
ಏನಿದೇನಿದು ಈ ದಿನ ನನ್ನೊಂದಿಗೆ
ಮಾತಿಗಿಳಿದಿರುವೆ ಬಿಡುವಾಗಿದೆಯೊ?
ಬೇಸರವಾಗಿದೆಯೊ? ಏಂದೆಲ್ಲ ಪ್ರಶ್ನಿಸಿತು.

ಚಿತ್ತವೆ ಸಾಕಿನ್ನು ವ್ಯಂಗ್ಯವಿದು,ಬೇಸರಕೆ
ಕಾರಣವನರಿಯದೆ ಚಿಂತೆಯ ಚಿತೆ ಸುಡುತಲಿಹುದು
ಭಾನುವಾರವು ಇಂದು ಹೇಗೊ ಬಿಡುವು ಮಾಡಿಕೊಂಡಿಹೆನು
ಸಮಯವಿಲ್ಲ. ಕೇಳಿದಷ್ಟಕೆ ಉತ್ತರಿಸು ನೀ ಎಂದೆ.

ಹೌದು ! ಮಾರ್ಗಗಳ ನಕಾಶೆಯೆ ನನ್ನ ಬಳಿ ಇದೆ
ಹಲವು ಮಾರ್ಗಗಳೀಗಾಗಲೆ ಕಂಡಿಹೆನು
ಕೆಲವು ಮಾರ್ಗಗಳ ಬಗ್ಗೆ ಕೇಳಿಹೆನು
ತಾಳ್ಮೆಯಿದ್ದಲ್ಲಿ ಮತ್ತಷ್ತ್ಟು ಮಾರ್ಗಗಳ ಹುಡುಕಲೆತ್ನಿಸುವೆನೆನುತ

ಮಾರ್ಗಗಳಿಗೇನು ಸಾಕಷ್ಟಿವೆ
ಕೆಟ್ಟ ಮಾರ್ಗಗಳು ಎರಡುಗಾವುದವಷ್ಟೆ
ಸಾಧನೆ ಮೋಕ್ಷದ ಮಾರ್ಗ ಅತಿ ದೂರ ಅತಿ ಎತ್ತರವು
ಹುಡುಕಿ ಸಾಗುವ ಹಂಬಲ ನಿನಗಿರಬೇಕೆಂದಿತು.

ಸಾಧನೆಯೊ,ಮೋಕ್ಷವೊ ದಾರಿತೋರಿಸೆನಗೆ
ನನ್ನ ಬಾಳ ನೌಕೆಯ ದಿಕ್ಸೂಚಿ ನೀನು
ಮಾರ್ಗ ಮಧ್ಯದಲಿ ಕೈಬಿಡದೆ ದಡಸೇರಿಸೆಂದು
ನನ್ನೆರಡನೆಯ ಪ್ರಶ್ನೆಗೆ ಉತ್ತರಿಸೆನಲು

ಮನದಾಳದ ಮಾತ ನೀನೇನು ಅರಿವೆ?
ಮಾತಿನಿಂದಲೆ ನಿನ್ನ ವ್ಯಕ್ತಿತ್ವ ರೂಪಿಸುವೆ
ಮಾತಿನಿಂದಲೆ ಮನ,ಮನೆಯೊನಡದಿರುವೆ
ಎಂಥ ಮಾತ ಎಂಥವರೊಡನಾಡಬಯಸುವೆ ಕೇಳೆಂದು

ಮಾತ ಬಿಟ್ಟವರೊಡನೆ ಸಿಹಿಮಾತನಾಡಬೇಕೆನಿಸುತಿದೆ
ಕಷ್ಟವಾದರು ಸತ್ಯವನೆ ಮಾತನಾಡಬೇಕೆನಿಸುತದೆ
ಕ್ಲಿಷ್ಟ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರದ ಮಾತನಾಡಬೇಕೆನಿಸುತಿದೆ
ನಿನ್ನ ಜಿಹ್ವೆಯಿದು ನನ್ನೆಲ್ಲ ಮಾತ ಬಂಧಿಸಿದೆ

ಪ್ರೀತಿಗೆ ಪ್ರೀತಿಯ ಮಾತು;ನಂಬಿಕೆಗೆ ನಂಬಿಕೆಯ ಮಾತು
ಹೊಟ್ಟೆಕಿಚ್ಚಿಗೆ ವ್ಯಂಗ್ಯದ ಮಾತು;ನಿಂದಿಸಲು ನಿಂದನೆಯ ಮಾತು
ಕಾಲಹರಣಕೆ ಹರಟೆಯ ಮಾತು;ಕರುಣೆಗೆ ಅನುಕಂಪದ ಮಾತು
ಬಣ್ಣಿಸಲು ಬಣ್ಣ ಬಣ್ಣದ ಮಾತು;ತಪ್ಪನೊಪ್ಪದೆ ತಿರುಗಿಸೆನ್ನುವ ಮಾತುಗಳಿಹವು

ಮನದೊಡೆಯ ಮಾರ್ಗಗಳಿವೆ,ಮಾತುಗಳಿವೆ
ಮಾತನಾಡುವ ಮುನ್ನ ಮಾರ್ಗ ಹಿಡಿಯಿವ ಮುನ್ನ
ನೆಮ್ಮದಿಯಿಂದಲೊಮ್ಮೆ ಮಾತನಾಡಿಸೆನ್ನನು ನರರುನ್ನತಿಗೊಯ್ವೆ
ನಿನ್ನ ಮಾತು ಮಾರ್ಗದಿಂದಲಿ ನೋಯಿಸದಿರು ಅನ್ಯಮನಸನೆಂದಿತು

ನಿನ್ನ ಉತ್ತರದಿ ನನ್ನ ಬೇಸರಕೆ ಕಾರಣವನರಿತೆ
ನಿನ್ನಲಿರುವ ಉತ್ತರವ ಬಿಟ್ಟು ಮತ್ತೆಲ್ಲೊ ಹುಡುಕಲೊರಟಿದ್ದೆ
ಸವಿಮಾತನಾಡುತ ಸನ್ಮಾರ್ಗದಲಿ ನೆಡೆಯಲೆತ್ನಿಸುವೆನು
ಹೀಗೆಂದು ಮನಸಿನೊಂದಿನ - ಮಾತ ಮುಗಿಸಿದೆನು.

-ಎಂ.ಪಿ ರಂಗನಾಥ
೨೦-೯-೨೦೦೯