About Me

My photo
Bangalore, Karnataka, India
ನನ್ನನ್ನು ನಾನೆ ಹುಡುಕುತಿದ್ದೇನೆ.

Wednesday, December 2, 2009

ನೆನಪಿನಂಗಳದಲ್ಲಿ

ನೆನಪು

ನೆನಪು ಕನ್ನಡಿಯಾಚೆಗಿನ
ಪ್ರತಿಬಿಂಬದ ಕಾಣದ ನೆರಳು
ನೆನಪು ದೀಪದ ಹುಳುವಿನ ಹೊಳಪು
ನೆನಪು ಭಾಷೆಯಿಲ್ಲದ ಮಾತು.

ಏಕಾಂತದಲಿರಬೇಕು
ಆಗ ನೆನಪಿನದೆ ಸಾಮ್ರಾಜ್ಯ
ಸಾಮ್ರಜ್ಯದ ದೊರೆ ನಾನೆಂದು
ಸಿಹಿ ನೆನಪು ಕಹಿ ನೆನಪಿನ ವ್ಯಾಜ್ಯ.

ಕಹಿ ನೆನಪು ಬೇಡವೆಂದರು
ಕಾಣಿಸುವ ಚೌತಿಯ ಚಂದದ ಚಂದಿರ
ಸಿಹಿನೆನಪೆಂಬ ದೊರೆ ಮೋಡದ ಮರೆಯಲಿ
ಕಾಣದೆ ಕುಳಿತಿರುವ ಯುಗಾದಿಯ ಶಶಾಂಕ.

ಇಬ್ಬರೂ ಚಂದ್ರರೆ,ಎರಡೂ ನೆನಪುಗಳೆ
ಕಾಣುವ ರೀತಿ,ನೆನಪುಗಳ ರುಚಿ ಬೇರೆಯಷ್ಟೆ
ಹಳಾತದಷ್ಟು ಸಿಹಿನೆನಪಿನ ಸಿಹಿ ಜಾಸ್ತಿ
ಕಹಿನೆನಪು ಹೊಸದಾದಷ್ಟು ಹುಳಿ ಹೆಚ್ಚು.

ನೆನಪು ಬಾಳೆಂಬ ಹೊತ್ತಿಗೆಯ
ಹಳೆಯ ಪುಟಗಳ ಗೊತ್ತಿರುವ ಸಾಲುಗಳು
ಒಮ್ಮೊಮ್ಮೆ ಹೊಳೆಯುತದೆ ಹಳೆತ ನೆನಪಿಸುತದೆ
ಮಿನುಗುತದೆ ಮರೆಸಿ ಮರೆಯಾಗುತದೆ.

ಒಂದೂಂದು ಪುಟದಲೊಂದೊಂದು ತರಹದ ನೆನಪುಗಳು
ಬಾಲ್ಯದ ನೆನಪುಗಳು; ನಕ್ಕು ನಗಿಸಿದ ನೆನಪುಗಳು
ಜೊತೆಯಾದ ನೆನಪುಗಳು;ಜೊತೆಯಲ್ಲಿದ್ದವರ ನೆನಪುಗಳು
ದೂರಾದ ನೆನಪುಗಳು;ದೂರ ಸರಿದವರ ನೆನಪುಗಳು.

ನೆನಪಿದೆಯೆ? ಎಂದು ನೆನಪಿಸಿದ ನೆನಪುಗಳು
ಮರೆಯಬೇಕೆಂದರು ಮರೆಯಲಾಗದ ನೆನಪುಗಳು
ಯಾರದೊ ಚಹರೆ,ಮೆಲುದನಿಯ ಸಿಹಿನೆನಪುಗಳು
ಈ ಕವನ ಬರೆಯುವಾಗ ಧುತ್ತೆಂದು ನೆನಾಪದ ನೆನಪುಗಳು.

ಹೀಗೆ ಬದುಕಿನರ್ಥ ಮೂರಕ್ಷರದ ಎರಡುಪದಡೊಳಗಿಹುದು
ನೆಡದ ದಾರಿಯ ಬಿಂಬಿಸುವ ಹಳೆಯ ನೆನಪುಗಳು
ನಾಳೆಯ ದಾರಿಯ ತೋರಿಸುವ ಹೊಸ ಕನಸುಗಳು
ನೆನಪಿನೊಂದಿಗೆ ಕನಸ ನನಸಾಗಿಸುವುದೆ ಜೀವನವಲ್ಲವೆ?

-ಎಂ.ಪಿ ರಂಗನಾಥ
೨೨-೧೧-೨೦೦೯

ಇತ್ತೀಚಿನ ಕವನ

ಮನಸಿನೊಂದಿನ ಮಾತು

ಹೀಗೊಮ್ಮೆ ನನ್ನ ಮನಸ್ಸನು
ಮಾತಿಗೆಳದು ಹೀಗೆಂದು ಪ್ರಶ್ನಿಸಿದೆ
ಮನಸ್ಸಿದ್ದರೆ ಮಾರ್ಗ ಎಂಬುತ್ತಾರಲ್ಲ ನಿಜವೆ?
ಮನಸ್ಸಿನಲ್ಲಿರುವುದೆ ಮಾತಾಗುವುದಂತಲ್ಲ ಹೌದೆ? ಎಂದು.

ಮನಸ್ಸು ಗಹಗಹಿಸಿ ನಗು ನಕ್ಕು
ಏನಿದೇನಿದು ಈ ದಿನ ನನ್ನೊಂದಿಗೆ
ಮಾತಿಗಿಳಿದಿರುವೆ ಬಿಡುವಾಗಿದೆಯೊ?
ಬೇಸರವಾಗಿದೆಯೊ? ಏಂದೆಲ್ಲ ಪ್ರಶ್ನಿಸಿತು.

ಚಿತ್ತವೆ ಸಾಕಿನ್ನು ವ್ಯಂಗ್ಯವಿದು,ಬೇಸರಕೆ
ಕಾರಣವನರಿಯದೆ ಚಿಂತೆಯ ಚಿತೆ ಸುಡುತಲಿಹುದು
ಭಾನುವಾರವು ಇಂದು ಹೇಗೊ ಬಿಡುವು ಮಾಡಿಕೊಂಡಿಹೆನು
ಸಮಯವಿಲ್ಲ. ಕೇಳಿದಷ್ಟಕೆ ಉತ್ತರಿಸು ನೀ ಎಂದೆ.

ಹೌದು ! ಮಾರ್ಗಗಳ ನಕಾಶೆಯೆ ನನ್ನ ಬಳಿ ಇದೆ
ಹಲವು ಮಾರ್ಗಗಳೀಗಾಗಲೆ ಕಂಡಿಹೆನು
ಕೆಲವು ಮಾರ್ಗಗಳ ಬಗ್ಗೆ ಕೇಳಿಹೆನು
ತಾಳ್ಮೆಯಿದ್ದಲ್ಲಿ ಮತ್ತಷ್ತ್ಟು ಮಾರ್ಗಗಳ ಹುಡುಕಲೆತ್ನಿಸುವೆನೆನುತ

ಮಾರ್ಗಗಳಿಗೇನು ಸಾಕಷ್ಟಿವೆ
ಕೆಟ್ಟ ಮಾರ್ಗಗಳು ಎರಡುಗಾವುದವಷ್ಟೆ
ಸಾಧನೆ ಮೋಕ್ಷದ ಮಾರ್ಗ ಅತಿ ದೂರ ಅತಿ ಎತ್ತರವು
ಹುಡುಕಿ ಸಾಗುವ ಹಂಬಲ ನಿನಗಿರಬೇಕೆಂದಿತು.

ಸಾಧನೆಯೊ,ಮೋಕ್ಷವೊ ದಾರಿತೋರಿಸೆನಗೆ
ನನ್ನ ಬಾಳ ನೌಕೆಯ ದಿಕ್ಸೂಚಿ ನೀನು
ಮಾರ್ಗ ಮಧ್ಯದಲಿ ಕೈಬಿಡದೆ ದಡಸೇರಿಸೆಂದು
ನನ್ನೆರಡನೆಯ ಪ್ರಶ್ನೆಗೆ ಉತ್ತರಿಸೆನಲು

ಮನದಾಳದ ಮಾತ ನೀನೇನು ಅರಿವೆ?
ಮಾತಿನಿಂದಲೆ ನಿನ್ನ ವ್ಯಕ್ತಿತ್ವ ರೂಪಿಸುವೆ
ಮಾತಿನಿಂದಲೆ ಮನ,ಮನೆಯೊನಡದಿರುವೆ
ಎಂಥ ಮಾತ ಎಂಥವರೊಡನಾಡಬಯಸುವೆ ಕೇಳೆಂದು

ಮಾತ ಬಿಟ್ಟವರೊಡನೆ ಸಿಹಿಮಾತನಾಡಬೇಕೆನಿಸುತಿದೆ
ಕಷ್ಟವಾದರು ಸತ್ಯವನೆ ಮಾತನಾಡಬೇಕೆನಿಸುತದೆ
ಕ್ಲಿಷ್ಟ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರದ ಮಾತನಾಡಬೇಕೆನಿಸುತಿದೆ
ನಿನ್ನ ಜಿಹ್ವೆಯಿದು ನನ್ನೆಲ್ಲ ಮಾತ ಬಂಧಿಸಿದೆ

ಪ್ರೀತಿಗೆ ಪ್ರೀತಿಯ ಮಾತು;ನಂಬಿಕೆಗೆ ನಂಬಿಕೆಯ ಮಾತು
ಹೊಟ್ಟೆಕಿಚ್ಚಿಗೆ ವ್ಯಂಗ್ಯದ ಮಾತು;ನಿಂದಿಸಲು ನಿಂದನೆಯ ಮಾತು
ಕಾಲಹರಣಕೆ ಹರಟೆಯ ಮಾತು;ಕರುಣೆಗೆ ಅನುಕಂಪದ ಮಾತು
ಬಣ್ಣಿಸಲು ಬಣ್ಣ ಬಣ್ಣದ ಮಾತು;ತಪ್ಪನೊಪ್ಪದೆ ತಿರುಗಿಸೆನ್ನುವ ಮಾತುಗಳಿಹವು

ಮನದೊಡೆಯ ಮಾರ್ಗಗಳಿವೆ,ಮಾತುಗಳಿವೆ
ಮಾತನಾಡುವ ಮುನ್ನ ಮಾರ್ಗ ಹಿಡಿಯಿವ ಮುನ್ನ
ನೆಮ್ಮದಿಯಿಂದಲೊಮ್ಮೆ ಮಾತನಾಡಿಸೆನ್ನನು ನರರುನ್ನತಿಗೊಯ್ವೆ
ನಿನ್ನ ಮಾತು ಮಾರ್ಗದಿಂದಲಿ ನೋಯಿಸದಿರು ಅನ್ಯಮನಸನೆಂದಿತು

ನಿನ್ನ ಉತ್ತರದಿ ನನ್ನ ಬೇಸರಕೆ ಕಾರಣವನರಿತೆ
ನಿನ್ನಲಿರುವ ಉತ್ತರವ ಬಿಟ್ಟು ಮತ್ತೆಲ್ಲೊ ಹುಡುಕಲೊರಟಿದ್ದೆ
ಸವಿಮಾತನಾಡುತ ಸನ್ಮಾರ್ಗದಲಿ ನೆಡೆಯಲೆತ್ನಿಸುವೆನು
ಹೀಗೆಂದು ಮನಸಿನೊಂದಿನ - ಮಾತ ಮುಗಿಸಿದೆನು.

-ಎಂ.ಪಿ ರಂಗನಾಥ
೨೦-೯-೨೦೦೯