About Me

My photo
Bangalore, Karnataka, India
ನನ್ನನ್ನು ನಾನೆ ಹುಡುಕುತಿದ್ದೇನೆ.

Friday, January 15, 2010

ನಾಳೆ ನಮಗೂ ವಯಸ್ಸಾಗುತ್ತದಲ್ಲವೆ?

ಸ್ನೇಹಿತರೆ,

ನಿಮ್ಮ ಮನೆಯಲ್ಲಿ ನಿಮ್ಮೊಂದಿಗೆ ನಿಮ್ಮ ಅಜ್ಜ -ಅಜ್ಜಿ ಇದ್ದಾರೆಯೆ? ಅಥವಾ ನಿಮ್ಮ ಹುಟ್ಟೂರಿನಲ್ಲಿದ್ದಾರೆಯೆ?ಹಾಗದರೆ ನೀವು ನಿಜವಾಗಿಯು ಭಾಗ್ಯವಂತರು.ಅಜ್ಜ-ಅಜ್ಜಿಯಂದಿರು ನಮ್ಮ ವಂಶ ವೃಕ್ಷದ ಬೇರುಗಳು. ವೃಕ್ಷದಲ್ಲಿ ಚಿಗುರೊಡೆವ ಎಲೆಗಳಿಗೆ ಬೇರು ನೀರುಣಿಸುವಂತೆ, ನಮಗೆ ಅನುಭವವೆಂಬ ನೀರುಣಿಸುವ ಪೂರ್ವಿಕರವರು. ಹಿರಿಯರ ಆರೈಕೆ, ಅವರ ಮಾತುಗಳಿಂದ ನಿಮಗೆ ಬೇಸರವಾಗಿರಬಹುದು. ಆದರೆ ನಿಮ್ಮ ಒಳಗಣ್ಣಿನಿಂದ ಅವರನ್ನು ಗಮನಿಸಿದ್ದೀರಾ?ಅವರಿಗೆ ವಯಸ್ಸಾದೆಂತಲ್ಲ ಪುಟ್ಟ ಮಗುವಿನಂತಾಗುತ್ತಾರೆ.ಆಗ ತಾನೆ ಹೆಜ್ಜೆ ಇಡಲು ಕಲಿತ ಮಗು ಆಸರೆ ಹುಡುಕಿ ನೆಡವಂತೆ,ಕೋಲಿನ ಆಸರೆ ಬಯಸುತ್ತಾರೆ. ಮಾತು ಕಲಿತ ಮಗು ಹೇಗೆ ಬಿಡುವಿಲ್ಲದೆ ಮಾತನಡುವುದೊ ಅಂತೆಯೆ ಹಿರಿಯರು ಅನುಭವದ ಮಾತನಾಡಲು ಹಂಬಲಿಸುತ್ತಾರೆ. ಮಗುವಿನಂತೆ ಅವರ ದೈನಂದಿನ ಚಟುವಟಿಕೆಗಳಿಗೆಲ್ಲ ನಮ್ಮ ಆಸರೆ ಅತ್ಯವಶ್ಯಕ.ವಯಸ್ಸಾದಂತೆಲ್ಲ ರಕ್ತದೊತ್ತಡ, ಸಕ್ಕರೆ ಖಾಯಿಲೆ ಹೀಗೆ ಒಂದಿಲ್ಲೊಂದು ರೋಗದ ನಂಟು ತಪ್ಪಿದ್ದಲ್ಲ .ಅವರಿಗೆ ಔಷಧ ಕೊಡುವುದು,ತಪಾಸಣೆಗೆ ಆಸ್ಪತ್ರೆಗೆ ಕರೆದೊಯ್ಯುವುದು ಸುಲುಭದ ಮಾತಲ್ಲ. ಅತಿಯಾದ ತಾಳ್ಮೆ ಬೇಕು. ಆರೈಕೆ ಮಾಡುವ ಮನಸ್ಸಿಲ್ಲದೆ ವಿನಾ ಕಾರಣ ಅವರ ಮೇಲೆ ಕೂಗಾಡಿ ಅವರ ಮನಸ್ಸನ್ನು ನೋಯಿಸಬೇಡಿ.ನಿಮ್ಮಿಂದ ಅವರ ಆರೈಕೆ ಸಾಧ್ಯವಿಲ್ಲ ಎಂಬುದಾದರೆ ಅವರು ಎಲ್ಲಿದ್ದರೆ ಆರೋಗ್ಯವಾಗಿರುತ್ತಾರೆಂದು ಬಯಸುತ್ತಾರೆಯೊ ಅಲ್ಲಿ ಅವರನ್ನು ಸ್ವತಂತ್ರವಾಗಿರಲು ಬಿಟ್ಟು ಬಿಡಿ. ನಿಮ್ಮ ಅಜ್ಜ-ಅಜ್ಜಿ ನಿಮ್ಮಷ್ಟು ಓದಿಲ್ಲದೆ ಇರಬಹುದು, ವಿಜ್ಙಾನ, ರಾಜಕೀಯ, ತಂತ್ರಜ್ಙಾನ,ವರ್ತಮಾನ ವಿಷಯದ ಬಗ್ಗೆ ನಿಮ್ಮಷ್ಟು ತಿಳಿಯದೆ ಇರಬಹುದು. ಆದರೆ ಮನುಷ್ಯ ಸಂಘಜೀವಿಯಾದ ಕಾರಣ ಮನುಷ್ಯ ಜೀವನಕ್ಕೆ ಅತ್ಯಾವಶ್ಯಕವಾದ ಮನುಷ್ಯ-ಮನುಷ್ಯರ ನಡುವಿನ ಸಂಬಂಧದ ಅರಿವು ಅವರಿಗಿರುತ್ತದೆ. ತಾಳ್ಮೆ,ಹಸಿವು,ಕಷ್ಟ,ಸಮಯ, ಅವಮಾನ,ಬಹುಮಾನ ಇವೆಲ್ಲವುಗಳ ಬೆಲೆ ಗೊತ್ತಾಗಿರುತ್ತದೆ.ನಿಮಗೆ ಬಿಡುವಾದಗ ಅವರೊಂದಿಗೆ ಮಾತನಾಡಿ,ಅವರ ಪ್ರತಿಯೊಂದು ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅದರಲ್ಲಿ ಅಗಾಧ ಅರ್ಥ ಅಡಗಿರುತ್ತದೆ .ದಿನದ ಹತ್ತು ನಿಮಿಷ ವಯಸ್ಸಾದವರೊಂದಿಗೂ ಹಾಗು ಹತ್ತು ನಿಮಿಷ ಸಣ್ಣ ಮಕ್ಕಳೊಂದಿಗೂ ಕಳೆದು ನೋಡಿ.ನಿಮಗೆ ಗೊತ್ತಿಲ್ಲದಂತೆ ನಿಮ್ಮ ಮನಸ್ಸು ಮುಗ್ಧವಾಗ ಬಯಸಿ ಅದೆಷ್ಟೊ ಅನುಭವದ ವಿಚಾರಗಳನ್ನು ತಿಳಿಯುತ್ತದೆ.

ಯುವಕರಾದ ನಾವು ವಯಸ್ಸಾದವರಿಗೆ ಹೇಗೆ ಗೌರವ ಸಲ್ಲಿಸಬಹುದು? ಮೊದಲನೆಯದಾಗಿ ಜನಭರಿತ ಬಸ್ಸುಗಳಲ್ಲಿ ’ಹಿರಿಯ ನಾಗರಿಕರಿಗೆ’ ಎಂದು ಕಾಯ್ದಿರಿಸಿರುವ ಜಾಗದಲ್ಲಿ ನೀವು ಕುಳಿತಿದ್ದರೆ ವೃಧ್ದರಿಗೆ ಅದನ್ನು ಬಿಟ್ಟುಕೊಡಿ.ಬೇರೆಯವರಿಗೂ ಬಿಟ್ಟು ಕೊಡುವಂತೆ ಮನವರಿಕೆ ಮಾಡಿ ಎಂಬುದು ನನ್ನ ಮನವಿ .ಹುಟ್ಟು ಹಬ್ಬಗಳ ದಿನದಂದು ಅನ್ಯ ಸಂಸ್ಕೃತಿಯರಂತೆ ದುಂದುವೆಚ್ಚ ಮಾಡುವ ಬದಲು ನಿಮ್ಮ ಅಜ್ಜ-ಅಜ್ಜಿಯರಿಗೆ ಅವಶ್ಯಕವಾದ ವಸ್ತುಗಳನ್ನು ತಂದು ಕೊಡಿ.ನಮ್ಮ ಸಮಾಜದ ಸುಶಿಕ್ಷಿತರು ತಮ್ಮ ತಂದೆ- ತಾಯಿಯರನ್ನು ನೋಡಿಕೊಳ್ಳಲಾಗದೆ ಹುಟ್ಟು ಹಾಕಿರುವ ವೃಧ್ದಾಶ್ರಮಗಳಿಗೆ ಹೋಗಿ ನಿಮ್ಮಿಂದಾದ ಸಹಾಯ ಮಾಡಿ.ನಿಮಗೆ ಸಂಜೆ ಬಿಡುವಿದ್ದರೆ ಅವರನ್ನು ವಾಯುವಿಹಾರಕ್ಕೆ ಕರೆದು ಕೊಂಡು ಹೋಗಿ.ಅವರ ಸ್ನೇಹಿತರೊಂದಿಗೆ ಅಥವಾ ಸಮಕಾಲೀನರೊಂದಿಗೆ ಹರಟಲು ಅವಕಾಶ ಮಾಡಿ ಕೊಡಿ.ಅಜ್ಜ-ಅಜ್ಜಿಯಂದಿರು ಹೇಳುವ ನಾಲ್ಕು ಅನುಭವದ ಮಾತುಗಳನ್ನು ಕೇಳುವ ತಾಳ್ಮೆಯನ್ನು ಬೆಳಸಿಕೊಳ್ಳಿ.ನೀವು ಪ್ರಚಲಿತ ತಂತ್ರಙ್ಙಾನ(ಮೊಬೈಲ್,ಎಟಿಮ್ ಬಳಕೆ) ಹಾಗು ವಿದ್ಯಮಾನದ ಬಗ್ಗೆ ಅವರೊಂದಿಗೆ ಚರ್ಚಿಸಿ .ಎಲ್ಲದಕಿಂತ ಹೆಚ್ಚಾಗಿ ವಯಸ್ಸಾದವರನ್ನು ಸ್ವತಂತ್ರವಾಗಿರಲು ಬಿಟ್ಟು ಬಿಡಿ.ನಿಮ್ಮದೇ ಆದ ಕಟ್ಟುಪಾಡುಗಳಿಂದ ಅವರನ್ನು ಬಂಧಿಸಬೇಡಿ.

ಜನವರಿ ೧೨ ರಂದು ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ನಾವು ಅರ್ಥಪೂರ್ಣವಾಗಿ ಆಚರಿಸಬೇಕೆಂದರೆ ಅವರ ಸಂದೇಶವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. " ಪ್ರಾರ್ಥಿಸುವ ತುಟಿಗಳಿಗಿಂತ ಸಹಾಯ ಮಾಡುವ ಕೈಗಳು ಪವಿತ್ರ" ಎಂಬ ಅವರ ಶಕ್ತಿವಾಣಿ ನಮ್ಮಲ್ಲಿ ಅದೆಂತಹ ಬೆಳಕನ್ನು ಮೂಡಿಸುತ್ತದೆ ಅಲ್ಲವೆ?. ಸ್ನೇಹಿತರೆ, ಸ್ವಲ್ಪ ಗಮನಿಸಿ, ಮನುಷ್ಯ ಹೆದರುವುದು ಮೂರು ಸಂಗತಿಗಳಿಗೆ. ಮೊದಲನೆಯದು ಅನಾರೋಗ್ಯ,ಎರಡನೆಯದು ವೃಧಾಪ್ಯ ಮತ್ತು ಕೊನೆಯದು ಸಾವು. ಈಗಾಗಲೆ ವೃಧಾಪ್ಯದೊಂದಿಗೆ ಅನಾರೋಗ್ಯ ಅಂಟಿಕೊಂಡು ಸಾವಿನ ಭಯದಲ್ಲಿರುವವರಿಗೆ ನಾಲ್ಕು ಭರವಸೆಯ ಮಾತನಡುವದು,ಸಹಾಯ ಮಾಡುವುದು ನಮಗೆ ಕಷ್ಟವೆ?ನಿಮ್ಮ ಅಜ್ಜ-ಅಜ್ಜಿಯಂದಿರನ್ನು ಪ್ರೀತಿಸಿ,ಗೌರವಿಸಿ. ಏಕೆಂದರೆ ನಾಳೆ ನಮಗೂ ವಯಸ್ಸಾಗುತ್ತದಲ್ಲವೆ?

No comments: