About Me

My photo
Bangalore, Karnataka, India
ನನ್ನನ್ನು ನಾನೆ ಹುಡುಕುತಿದ್ದೇನೆ.

Saturday, June 23, 2012

"ಸ್ಪಂದನ " - ಸ್ಪಂದಿಸಿ

ಗೆಳೆಯರೇ , ನಾನು ಕೆಲಸ ಮಾಡುತ್ತಿರುವ ಕಂಪನಿಯ CSR ( Corporate Social Responsibility ) ಚಟುವಟಿಕೆಯ ಒಂದು ಅಂಗ ಈ ಸ್ಪಂದನ .  ಈ ಕಾರ್ಯಕ್ರಮದ ಮೂಲ ಉದ್ದೇಶ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಕಲಿಸುವುದು.  ಇದಕ್ಕಾಗಿ ಬೆಂಗಳೂರಿನ ಗರುಡಾಚಾರ್ ಪಾಳ್ಯದ  ಸರ್ಕಾರಿ ಶಾಲೆಯೊಂದನ್ನು ಗುರುತಿಸಲಾಗಿದೆ . ಕಾರ್ಯಕರ್ತನಾಗಿ ಸೇರಿದ ನಾನು ಹೀಗೊಂದು ದಿನ ಶಾಲೆಗೆ ಭೇಟಿ ಕೊಟ್ಟೆನು. ಅಲ್ಲಿಯ ಶಿಕ್ಷರೊಂದಿಗೆ ಮಾತನಾಡಿ ಮೂರನೆ ತರಗತಿ ಮಕ್ಕಳಿಗೆ ಪಾಠ ಮಾಡುವ ಅನುಮತಿ ಪಡೆದು , ಕೊಠಡಿಯೊಳಗೆ ಬಂದೆನು. ಕಪ್ಪು ಹಲಗೆ , ಸೀಮೆಸುಣ್ಣ ,  ಮಕ್ಕಳು ಧರಿಸಿದ್ದ ಶಾಲೆಯ ಸಮವಸ್ತ್ರ , ಇತ್ಯದಿಗಳನ್ನು ನೋಡಿ ನಾ  ಓದಿದ  ಪ್ರಾರ್ಥಮಿಕ  ಶಾಲೆಯ ಚಿತ್ರ ಕಣ್ಣು ಮುಂದೆ ಬಂದಂತಾಯಿತು.  ಬಾಲ್ಯವನ್ನು ನೆನೆದು ಖುಷಿಯಾದ ಮನಸ್ಸಿಗೆ , ವಾತಾವರಣ ನೋಡಿ  ಮರುಕವೂ ಉಂಟಾಯಿತು. ಮಕ್ಕಳನ್ನು ಮಾತನಾಡಿಸಿದ ನಂತರ , ಪುಸ್ತಕದಲ್ಲಿ ಬರೆದಂತೆ " Dark , Bark , -----"   ಎಂದು ಕಪ್ಪು ಹಲಗೆಯ ಮೇಲೆ  ಬರೆದೆ. ಕೊಟ್ಟ ಎರೆಡು ಶಬ್ದದ ಪ್ರಾಸದಂತೆ ಮೂರನೆ ಶಬ್ದ ಬರೆಯಲು ಸೂಚಿಸಿತ್ತು . ಎಲ್ಲರೂ ಮೌನವಾಗಿದ್ದು ಕಂಡು ಉತ್ತರಕ್ಕಾಗಿ ಕುತೂಹಲದಿಂದ ಕಾದೆ . ಮಕ್ಕಳು ನನ್ನನ್ನು  ತದೇಕಚಿತ್ತದಿಂದ ನೋಡುತ್ತ D..B... ಎಂದು ಕೂಗುತ್ತಿದ್ದನ್ನು ನೋಡಿ ,  ಹೊರಗೆ ನಾಲ್ಕನೆ ತರಗತಿಗೆ ಪಾಠ ಮಾಡುತಿದ್ದ ಶಿಕ್ಷಕರು ಹೇಳಿದರು " ಮಕ್ಕಳಿಗೆ A,B,C,D ....a,b,c,d ಅಷ್ಟು ಸರಿಯಾಗಿ ಬರುವುದಿಲ್ಲ "   ಎಂದು . ಕೇಳಿ ಧಿಗ್ಬ್ರಾಂತನಾದೆ. !! ಅಕ್ಷರ ಕಲಿಯದ ಮಕ್ಕಳು ಶಬ್ದ ಕಲಿಯುವುದು ಎಂದು ? ಶಬ್ದ ಕಲಿತು ವಾಕ್ಯ ರಚಿಸುವುದು ಎಂದು ? .. ನಂತರ ಕಪ್ಪು ಹಲಗೆಯ ಮೇಲೆ ಅಕ್ಷರ ಬರೆದು ಗುರುತಿಸುವಂತೆ ಸೂಚಿಸಿದೆ . "d"  ಎಂದು ಬರೆದಾಗ "b" ಎಂದು "j" ಎಂದು ಬರೆದಾಗ "i" ಎಂದು ಕೂಗಲಾರಂಭಿಸಿದರು . ಶಿಕ್ಷಣ ವ್ಯವಸ್ಥೆಯನ್ನು ಕಂಡು ಅಸಮಾಧಾನವಾಯಿತು .  ಮುಂದಿನ ಎರೆಡು  ಭೇಟಿಗಳಲ್ಲಿಯೂ ಅಕ್ಷರ ಕಲಿಸಿದೆ . ಹಿಂದಿನ  ಸಾಲಿನಲ್ಲಿ  ಕೂಡುವ ಲಿಂಗರಾಜು ಎನ್ನುವ ವಿದ್ಯಾರ್ಥಿಯನ್ನು ನಾನು ಮೊದಲನೆಯ ದಿನ  ಗಮನಿಸಿದೆ.  ತನ್ನದೇ ಆದ ಪ್ರಪಂಚದಲ್ಲಿ ಕೂತಿದ್ದ  . ಕೇಳಿದಾಗ ತನಗೆ ಬರಿಯಲು ಬರುವುದಿಲ್ಲವೆಂದು ಹೇಳಿದ . ಮುಂದಿನ ಸಾಲಿನಲ್ಲಿ ಕೂರಿಸಿ ಅವನ ಪುಸ್ತಕದಲ್ಲಿ  ಅಕ್ಷರವನ್ನು ಅವನೊಂದಿಗೆ ಹೇಳಿಸುತ್ತಾ  ಬರೆದು ಕೊಟ್ಟಿದ್ದೆ . ನನ್ನ ಇತ್ತೀಚಿನ ಶಾಲೆಯ ಭೇಟಿ ಮುಗಿಸಿ ಹೊರಟಿದ್ದೆ , ಸಾರ್ ..... ಎಂದು ಕೂಗುತ್ತಾ  ಲಿಂಗರಾಜು ಬಂದವನೆ ನನಗೆ a b c d ... ಈಗ ಬರುತ್ತೆ ಎಂದ. ನಾನು ಅಷ್ಟು ಗಮನಿಸಲಿಲ್ಲ .. ನೀವು ಮೊದಲನೆ ದಿನ ಬರೆದದ್ದು D .. A .. R .. K , B ..A..R..K  ಎಂದಾಗ ಆಶರ್ಯವಾಗಿ "L" ಅಕ್ಷರ ಬರೆಯಲು ಹೇಳಿದೆ . ತಲೆ ತಗ್ಗಿಸಿ  ಸುಮ್ಮನಾದ , ನನಗೆ ಆ ಕ್ಷಣ ಬೇಜಾರಾಯಿತು. ಮರು ಕ್ಷಣವೇ ತನ್ನ ಪುಸ್ತಕದ ಮೊದಲನೆ ಪುಟ ತೆಗೆದು ಯಾರೊ ಬರೆದುಕೊಟ್ಟ Lingaraju ಎನ್ನುವುದರಲ್ಲಿ ಮೊದಲನೆ ಅಕ್ಷರ ತೋರಿಸಿ ಅದರ ಕೆಳಗೆ "l"  ಎಂದು ಬರೆದ  . ನನ್ನ ಕಣ್ಣು ನನಗೆ ಗೊತ್ತಿಲ್ಲದಂತೆ ಒದ್ದೆಯಾಯಿತು . ಅವನಿಗೆ  'h', 'a' 'p' 'p' 'y' ಅಕ್ಷರ ಬರೆಯಲು ಹೇಳಿ ಹ್ಯಾಪಿ ಎಂದು ಹೇಳಿದೆ . ನನ್ನ ಕೈ ಕುಲುಕಿ ಥ್ಯಾಂಕ್ಯೂ ಸಾರ್ ಎಂದು ಕೈಗೆ ಮುತ್ತಿಟ್ಟು ಒಳಗೆ ಹೋದ . ಕಣ್ಣಿನಲ್ಲಿ ಏನೋ ಬಿದ್ದವರಂತೆ ನಟಿಸಿ ಕಣ್ಣು ವರೆಸುತ್ತಾ ನಾನು ಹೊರಟೆನು.


 ಸ್ನೇಹಿತರೆ , ಬನ್ನಿ ಸ್ಪಂದಿಸೋಣ   . ಅವಕಾಶವಂಚಿತರಿಗೆ ನಮ್ಮಿಂದಾದ ಸಹಾಯ ಮಾಡೋಣ.  ಕೇವಲ ಬಿಡುವಿನ ವೇಳೆಯಲ್ಲಿ ಸಹಾಯ ಮಾಡದೆ ಅವಶ್ಯಕತೆ ಇದ್ದಾಗಲೂ ಸಹಾಯ ಮಾಡೋಣ .  ಸಾಕ್ಷರ ಸಮಾಜ ಕಟ್ಟೋಣ !!


                                                                                                               - ರಂಗನಾಥ ಎಂ .ಪಿ 
                                                                                                                 ೨೪-೦೬-೨೦೧೨